Tuesday, 4 October 2011

ಮನದ ಮೂಲೆಯಿಂದ...

ಮನದ ಮೂಲೆಯಿಂದ...
ದಿನಾಂಕ : 5/10/2010

ಏಕೋ ಮನ ಕಲ್ಲೆಸೆದ ಕೊಳದಂತೆ ರಾಡಿಯಾಗಿದೆ.ಎಂದೂ ಇಲ್ಲದ್ದು ಇಂದೇ ಹೀಗೇಕಾಯಿತು. ಈ ವಿಷಯದಲ್ಲಿ ಯಾವತ್ತೂ ಮೌನ ಮುರಿಯದ ನಾನು ಇಂದು ಏಕೆ ಅಂತಹ ಮಾತುಗಳ್ನಾಡಿದೆ ಎಂದೇ ಗೊತ್ತಾಗುತ್ತಿಲ್ಲ. ಬಹುಶಃ ನನ್ನೊಳಗೆ ಹುದುಗಿದ್ದ ಭಾವನೆಗಳಿಗೆ ಇಂದು ಮಾತಿನ ರೂಪ ದೊರಯಿತು ಎನಿಸುತಿದೆ. ಆದರೂ ಅವಳ ಮನ ನೋಯಿಸುವ ಹಕ್ಕು ನನಗ್ಯಾರು ಕೊಟ್ಟೋರು....?? ಅವಳ ಮಾತು ಹಿಡಿಸದಿದ್ದರೆ ಸುಮ್ಮನೆ ವಿಷಯ ಬದಲಾಯಿಸಬಹುದಿತ್ತಲ್ಲ...!!! ವಾದ ಮಾಡಿದ್ದಾದರೂ ಏಕೆ?? 


         ವಾಸ್ತವದಲ್ಲಿ ನಡೆದ ವಿಷಯವಿಷ್ಟು - "ಅವರಿಬ್ಬರು ಪ್ರೀತಿಸಿದ್ದರು, ನೂರಾರು ಕನಸುಗಳನ್ನು ಕಂಡಿದ್ದರು... ಆದರೆ ಈ ಪ್ರೀತಿ ಬಹುಕಾಲ ಸಾಗಲಿಲ್ಲ... ಇದ್ದಕ್ಕಿದ್ದಂತೆ ಒಂದು ದಿನ ಅವನು ಅವಳನ್ನು ಅವಳ ಪ್ರೀತಿಯನ್ನು ಬಿಟ್ಟು ದೂರದ ಮುಂಬೈಗೆ ಹೋದ. ಮೊನ್ನೆ ಅವನಿಗಲ್ಲಿ ಮದುವೆಯಾಯಿತು ಎಂದು ತಿಳಿಯಿತು".ವಿಷಯ ತಿಳಿದಾಗ ಕುಗ್ಗಿಹೋದಳು. ಅವಳ ಅಕ್ಕ ಕೂರಿಸಿ ಸಮಾಧಾನ ಹೇಳಿದಳು. ಏನೂ ಹೇಳಲು ತೋಚದ ನಾನು ಮೌನದ ಮುಸುಕು ಹೊದ್ದು ಕುಳಿತೆ. "ಆದದ್ದು ಆಯಿತು ಮರೆತುಬಿಡು ಅವನನ್ನ" ಎಂದಳು ಅಕ್ಕ. ಅಕ್ಕ ಒಳ ಹೋದಾಗ ನಮ್ಮಬ್ಬರ ನಡುವಿನ ಮೌನ ಮುರಿಯುವ ಸಲುವಾಗಿ ಹಾಗೂ ಅವಳ ಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಒಳ ಹೋಗಿ ಅವಳ ಪ್ರೀತಿಯ ಪಿಂಕಿಯನ್ನು ಎತ್ತಿಕೊಂಡು ಬಂದು ನೋಡಿದರೆ ಅವಳ ಪತ್ತೆಯೇ ಇಲ್ಲ. ಮನದಲ್ಲಿ ಏನೇನೋ ಕೆಟ್ಟ ಕಲ್ಪನೆಗಳು ಹಾದು ಹೋದವು. ಹಾಗೆಲ್ಲ ಆಗಿರಲಿಕ್ಕಿಲ್ಲ ಎಂದು ನನಗೆ ನಾನೇ ಸಮಾಧಾನಿಸಿಕೊಂಡು ಅವರ ತೋಟದಲ್ಲಿ ಹುಡುಕಲು ಹೊರಟೆ. ನನ್ನ ಭಯ ನಿಜವಾಗಿತ್ತು. ಬಾವಿಯ ಕಟ್ಟೆ ಹತ್ತಿ ನಿಂತಿದ್ದಳು. ಕೆಳಗಿಳಿಸಿ -"ಏನು ಮಾಡುತ್ತಿದ್ದಿ, ಬಾ ಮನೆಗೆ" ಎಂದೆ. "ಅವನು ನನ್ನ ತುಂಬಾ ಪ್ರೀತಿಸುತ್ತಾನೆ ಕಣೆ.... ನನಗಾಗಿ ಎಲ್ಲವನ್ನೂ ಎಲ್ಲರನ್ನು ಬಿಟ್ಟು ಬರುತ್ತಾನೆ ನೋಡುತ್ತಿರು...." ಎಂದಳು. ಆ ಕ್ಷಣಕ್ಕೆ ನನಗೆ "ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸ್ಸು" ಎಂಬ ಕವಿಯೋಬ್ಬರ ಕವನದ ಸಾಲುಗಳು ನೆನಪಾದವು.

ವಾಸ್ತವ ಕಣ್ಣೆದುರೇ ನಿಂತಿದ್ದರೂ ಅದನ್ನು ಒಪ್ಪಲು ಅವಳ ಮನ ಸಿದ್ಧವಿರಲಿಲ್ಲವೆನಿಸುತ್ತೆ. ಮತ್ತೆ ಮತ್ತೆ ಅದನ್ನೇ ಹೇಳುತ್ತಿದ್ದಳು. "ಸರಿ, ಈಗ ಮನೆಗೆ ಹೋಗೋಣ ಬಾ" ಎಂದು ಕೈ ಹಿಡಿದು ಮನೆಯ ದಾರಿ ಹಿಡಿದೆ. "ಕೈ ಬಿಡು ನಾನೇ ಬರುತ್ತೇನೆ" ಎಂದಳು. ಯಾಕೋ ಮನ ಒಪ್ಪಲಿಲ್ಲ. ಆದರೂ ಕೈ ಬಿಟ್ಟು ತಿರುಗಿ ನೋಡುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದೆ. ನನ್ನ ಹಿಂದೆ ಅವಳು ಬರುತ್ತಿದ್ದರಿಂದ ಧೈರ್ಯ ಬಂದು ಮುಂದೆ ನಡೆದೆ. ನನ್ನ ತಲೆ ನಿಷ್ಕ್ರಿಯವಾಗುತ್ತಿದೆ ಎಂದೆನಿಸಿತು.

ನನ್ನ ಅವಳ ಸ್ನೇಹ ೧೦ ವರುಷದಿಂದ ನಿರಂತರವಾಗಿ ಸಾಗಿ ಬಂದಿತ್ತು. ಎಲ್ಲ ಸಿಹಿಕಹಿ ಸಂಗತಿಗಳನ್ನು ಹಂಚಿಕೊಂಡ್ದಿದ್ದೆವು. ಯಾವತ್ತೂ ಬದುಕಿನ ಬಗ್ಗೆ ಬೇಸರ ಮೂಡಿರಲಿಲ್ಲ. ಆದರೆ ಇಂದು ನನ್ನ ಕಣ್ಣೆದುರೇ ಅವಳು ಸಾವನ್ನು ಬಯಸಿದಾಗ ಮೊಟ್ಟ ಮೊದಲ ಬಾರಿಗೆ ಅದರ ಬಗ್ಗೆ ಬೇಸರ ಮೂಡಿತು. ಹೀಗೆ ಸ್ವಲ್ಪ ದೂರ ಸಾಗಿದ್ದೆ. ಏನೋ ಅನುಮಾನ ಉಂಟಾಗಿ ತಿರುಗಿ ನೋಡಿದರೆ ಮತ್ತೆ ಕಟ್ಟೆ ಹತ್ತಿದ್ದಳು. ನನಗೆ ನನ್ನ ಬಗ್ಗೆಯೇ ಕೋಪ ಉಕ್ಕಿತು. ಇನ್ನೇನು ಹಾರಲು ತಯಾರಾಗಿ ನಿಂತಿದ್ದಳು. ಎದೆ ಬಡಿತ ಹೆಚ್ಚಾದಂತಾಯಿತು. ಓಡಿ ಹೋಗಿ ಹಿಡಿದೆಳೆದೆ. ಸಿಟ್ಟು ನೆತ್ತಿಗೇರಿತ್ತು. ಕೋಪದ ಬರದಲ್ಲಿ ಕೆನ್ನೆಗೆ ನಾಲ್ಕು ಬಿಗಿದು ಕೇಳಿದೆ "ಪ್ರೀತಿಸುತ್ತಾನಾ...??? ಕರೆದರೆ ಓಡೋಡಿ ಬರುತ್ತಾನೆ ಅಲ್ವಾ....??? ಕರಿ ನೋಡೋಣ ಬರಲಿ ಅವನು...!! ಅವ Romeo... ನೀ ಅವನ Juliet... ದೂರಾದ ಪ್ರೇಮಿಗಾಗಿ ನಿನ್ನ ಆತ್ಮಾರ್ಪಣೆ ಅಲ್ವ...???".

ಮಾತಾಡಲಿಲ್ಲ ಅವಳು. ಸುಮ್ಮನೆ ಅಳುತ್ತಿದ್ದಳು. ಇವಳ ಕೆಲಸ ನನ್ನಲ್ಲಿ ಅನುಕಂಪ ಮೂಡಿಸುವ ಬದಲು ಸಿಟ್ಟು ತರಿಸಿತ್ತು. ಎಂತಹ ಬೆಲೆ ತೆತ್ತರೂ ಸಿಗದ ಜೀವನವನ್ನು ಪ್ರೀತಿ ದೂರಾದದ್ದಕ್ಕೆ ಬಲಿಕೊಡ ಹೊರಟಿದ್ದಳು. ಇತ್ತಿಚ್ಚೆಗೆ ಇದು ಹೆಚ್ಚಾಗಿ ನಡೆಯುವ ಸಂಗತಿ. ಪ್ರೀತಿ ಪ್ರೇಮ ಎಂಬ ಹುಚ್ಚು ಆವೇಶದ ಭರದಲ್ಲಿ ತಮ್ಮ ಭವಿಷ್ಯವನ್ನು ಹಿಂದೆ ಮುಂದೆ ಯೋಚಿಸದೆ ಬಲಿ ಕೊಟ್ಟು ಬಿಡುತ್ತಾರೆ.
ಏನು ಹೇಳಿದರೆ ಇವಳಿಗೆ ಅರ್ಥವಾದೀತು ಎಂದು ಚಿಂತಿಸುವಂತಾಯಿತು. ಕೊನೆಗೆ "ನಿನಗೆ ನಿನ್ನ ಪ್ರೀತಿ ದಕ್ಕಲಿಲ್ಲವೆಂದು, ನೀನು ಸತ್ತು ನಿನ್ನ ತಂದೆ ತಾಯಿ ಅವರ ಪ್ರಿಯ ಮಗಳ ಪ್ರೀತಿಯಿಂದ ವಂಚಿತರಾಗುವಂತೆ ಮಾಡಬೇಡ..." ಎಂದೆ. ಮೌನ ದೇವಿಯ ಆಸರೆ ಪಡೆದಿದ್ದಳು. ಕತ್ತಲಾದ್ದರಿಂದ ಅವಳನ್ನು ಅವಳ ಮನೆಗೆ ಬಿಟ್ಟು ಓಲ್ಲದ ಮನಸ್ಸಿನಿಂದ ನಾನು ನನ್ನ ಮನೆಯ ದಾರಿ ಹಿಡಿದೆ...

ದಿನಾಂಕ :6/10/2010
ಬೆಳಗ್ಗೆ ೬.೧೫ರ ಹೊತ್ತಿಗೆ phone ಸದ್ದಾಯಿತು. Receive ಮಾಡಿದಾಗ ಅವಳ ಅಕ್ಕ ಬೇಗ ಬರುತ್ತಿಯಾ ಎಂದಳು. ಬೇಗ ಹೊರಟು ಅವಳ ಮನೆ ತಲುಪಿದಾಗ ನಿಶ್ಚಿಂತೆಯಿಂದ ಮಲಗಿದ್ದಳು. ನಿನ್ನೆ ನಾ ತಡೆದಿದ್ದೆ, ಆದರೆ ಇಂದು....!!! ಏಕೋ ಕಾಲುಗಳು ನಡುಗಿದಂತಾಗಿ ಕುಸಿದು ಕುಳಿತೆ.......
      
ಗೀಚಿದ್ದು : ನಿಕೇತ        

No comments:

Post a Comment