ಮೊದಲಮಾತು

ಸ್ವಭಾವತಃ ಪ್ರತಿಯೊಬ್ಬನೂ ಒಂದಲ್ಲ ಒಂದು ರೀತಿಯಲ್ಲಿ ಬರಹಗಾರನೇ. ಜೀವನದ ಒಂದಲ್ಲ ಒಂದು ಹಂತದಲ್ಲಿ ತೋಚಿದ ಒಂದಾರು ಗೆರೆಗಳನ್ನಾದರೂ ಗೀಚಿ, ಎಲ್ಲರಿಂದ ಮರೆಮಾಚಿ, ತನ್ನ ತಲೆದಿಂಬಿನ ಅಡಿಯಲ್ಲೋ, ಹಳೇ  ರಫ್  ಪುಸ್ತಕದ ಎಡೆಯಲ್ಲೋ- ಸಮಾದಿ ಕಟ್ಟಿ, ಸಮಾಧಾನಿಸಿಕೊಳ್ಳುತ್ತಾನೆ. ಅಂತ ನೂರಾರರಲ್ಲಿ ಒಂದು ಹತ್ತಾರು ಮಂದಿ ಅದರಲ್ಲೇ ಆಯ್ದ ಒಂದೆರಡನ್ನ ತಮ್ಮ college magazineಗೋ, ಗೋಡೆಪತ್ರಿಕೆಗೋ  ಕೊಟ್ಟು, ಸಂತಸಪಟ್ಟುಕೊಳ್ಳುತ್ತಾರೆ.

ಅಲ್ಲಾದರೋ-ಗಾತ್ರದ ಪರಿಮಿತಿ, ಸಮಯದ ಪರಿಮಿತಿ, ಕೊನೆಗೆ ಬರಹದ ರೀತಿಗೂ  ಇತಿ-ಮಿತಿಗಳಿರುತ್ತವೆ. ಇವೆಲ್ಲದಕ್ಕಿಂತ ದೊಡ್ಡದಾದ ಪರಿಮಿತಿ ಅಂದ್ರೆ-ಅದರ ವ್ಯಾಪ್ತಿ. ಅದು ಒಂದಷ್ಟೇ ಜಾಗಕ್ಕೆ ಸೀಮಿತ. ಅದಕ್ಕೆ ಒಂದಷ್ಟು ಪರಿಮಿತಿಗಳು- ಆದ್ರೆ  ಬರೆಯುವವನ ಭಾವನೆಗಳು ಮಾತ್ರ ಅಪರಿಮಿತ.

ಅಂತದ್ದೊಂದು ಮೇರೆಯನ್ನು ಮೀರುವ, ಬರಹಗಾರರನ್ನ ಮರೆಯಿಂದಾಚೆಗೆ ತರುವ, ಬರಹಗಳನ್ನ ಒರೆಗೆ ಹಚ್ಚುವ-ಹಚ್ಚಿಸುವ, ಓದುವವರನ್ನ ಹಾಗು ಬರೆಯುವವರನ್ನ ಹೆಚ್ಚಿಸುವ ಯತ್ನವೇ ಈ ಸ್ಪಂದನ.

ಇದು ಕಾರ್ಕಳದ ಭುವನೇಂದ್ರ ಕಾಲೇಜಿನ ಬರೆಯುವ-ಬೆರೆಯುವ ಹಂಬಲವಿರುವ ನಾಲ್ಕಾರು ವಿದ್ಯಾರ್ಥಿಗಳು, ತಮ್ಮದೇ ಕಾಲೇಜಿನ ತಮಗಿಂತಲೂ ಉತ್ತಮವಾಗಿ ಬರೆಯಬಲ್ಲ ನೂರಾರು ಸ್ನೇಹಿತರಿಗೆ ಕೊಡುವ ಬೆಂಬಲ.

ಓದುಗರಾದ ನಾವು ನೀವು ಬರೆಯುವ ಮುಕ್ತ ಅನಿಸಿಕೆಗಳೇ ಬರಹಗಾರರ ಪ್ರಯತ್ನಕ್ಕೆ ಪ್ರೋತ್ಸಾಹ.

ಇಲ್ಲಿ ಪ್ರಕಟಿತ ಬರಹಗಳು ಸ್ವತಃ ಬರಹಗಾರರ ಆಶಯಗಳನ್ನ ಬಿಂಬಿಸುತ್ತವೆ . ಕಾಲೇಜು ಅಥವಾ ಸ್ಪಂದನ ಅದಕ್ಕೆ ಜವಾಬ್ದಾರಿಯಲ್ಲ. ವ್ಯಕ್ತಿ ಅಥವಾ ಸಂಸ್ಥೆಯ ಟೀಕೆಗೆ ಇಲ್ಲಿ ಆಸ್ಪದವಿಲ್ಲ ಹಾಗೂ ಬರಹಗಳ ಸಂಪೂರ್ಣ ಹಕ್ಕು ಬರಹಗಾರರಿಗೇ ಇರುತ್ತದೆ.

ಬರಹಗಳನ್ನು ಕಳುಹಿಸಬಯಸುವ ಸ್ನೇಹಿತರು  ಗೆ ಮೇಲ್ ಮಾಡಿ, ಜೊತೆಗೆ ನಿಮ್ಮ ಕಿರು ಪರಿಚಯವಿರಲಿ.