ಅಂದು ನಾ ನಿನ್ನ ಬರಮಾಡಿಕೊಳ್ಳುವ
ತವಕದಲ್ಲಿ ತನು
ಮನ-ಮನೆಗಳ ಬಾಗಿಲು
ಮುರಕೊಂಡೆ.....
ಇಂದೆನ್ನ ಮನೆಗೆ ಬಾಗಿಲಿಲ್ಲ...
ಮೊರೆವ ಗಾಡಾಂಧಕಾರದ
ಕಾಣದ ಕಾನನನೆಡೆಯಲ್ಲಿ
ಒಂಟಿಮನೆಯೆನ್ನದು...
ಕೊರೆವ ಚಳಿಯಲ್ಲಿ
ಸುರಿವ ಬರಮಳೆಗೆ...
ಮುರುಕಲು ಮನೆಯ
ಅದ್ಯಾವುದೋ ಅಂಚಲ್ಲಿ
ಕೊರಕಲು ಕಲ್ಲಮೇಲೆ
ಕೊಕ್ಕರಗಾಲಲ್ಲಿ ಕೂತಿರುವೆ...
ಮನ-ಮನೆಗಳಿಗೆ ಹಂಚಿಲ್ಲ...
ಅಂದೊಮ್ಮೆ ಹೇಳಿದ್ದಿ ನೀ
'ಇನ್ನೂ ಕಾಲ ಮಿಂಚಿಲ್ಲ'
ಹುಂ.. ಇಂದದಕೆ ಅರ್ಥವಿಲ್ಲ...
ಕನಸುಗಳೆಲ್ಲ ವ್ಯರ್ಥ...
ಇಂದು ಈಗಿರುವುದು
ನಡುಗಿಸುವ ಮಿಂಚು ಮಾತ್ರ
ಎನ್ನೆದೆಯ ಗೂಡನ್ನೆ
ಅಡರಿಸುವ..ಬಡಬಡಿಸುವ
ಗುಡುಗುಗಳು ಮಾತ್ರ
ಪ್ರಶ್ನೆಗಳೊಂದಷ್ಟಕ್ಕೆ
ಎಲ್ಲಿಯೂ ಇಲ್ಲದ ಉತ್ತರ..
ಕೇಳಿಕೊಳ್ಳುವುದು...
ಹೇಳಿಕೊಳ್ಳುವುದು...
ನಾ ಯಾರ ಹತ್ತಿರ..?
ಅದೊಂದು ಗೋಡೆಯ
ಮೇಲೊಂದು ಮಿಣುಕು
ಬೆಳಕು ಮೂಡುತ್ತಿದೆಯೇ?!
ವಿಚಿತ್ರ...ಮಿಂಚು
ಮಿಂಚಿದ ಮೇಲೂ
ಮಿಣುಕಿನಾ ಆಸೆಯೇ...?!
ಹಾಳಾದ ಮನಸ್ಸು...
ಅದೂ ನನ್ನದೇ.. ಆದರೂ
ನಾ ಹೇಳಿದಂತಿಲ್ಲ..
ಬೇಡವೆಂದರೂ ಕನಸ
ಕಟ್ಟುತ್ತಿದೆ...
ಮುರಿದ ಬಾಗಿಲ ಸಂದಿನೆಡೆಯಲ್ಲಿ
ಕಾಣುವ ಒಂಟಿಮರದ
ಗೀಜಗನ ಗೂಡು ಅದಕೂ
ಕಾಣಿಸುತ್ತಿದೆ...
ಕನಸ ಪೋಣಿಸುತ್ತಿದೆ...
ಹುಚ್ಚು..ಮುರಿದ ಬಾಗಿಲ
ಯಾರು ತಟ್ಟುತ್ತಾರೆ?
ಅಲ್ಲ..ಅದು ಮಿಣುಕು
ಅಣಕಿಸುತ್ತಿರುವುದಲ್ಲ...
ಹಾಗಾದರೆ..ಅದು??!
ಹೌದು.. ಮನದನ್ನನಿಲ್ಲದ
ಮನೆಗೋಡೆ ನಿಲ್ಲದೆ
ಬಿರುಕು ಬಿಡುತಿಹುದು...
ಕನಸುಗಳು ನೆಲಕಚ್ಚಿ
ಬೆಂದುಹೋಗುವಾ ಸಮಯ
ಬೆಳಕ ನೋಡಿರದ ಮನಕೆ
ನೀ ನಂದು ಹಚ್ಚಿದ್ದ ಹಣತೆ
ನಂದಿಹೋಗುವುದೇ ಗೆಳೆಯಾ?
ಹೊಸತನದಿಂದ
No comments:
Post a Comment