Sunday, 29 September 2013

ಕಪ್ಪು – ಬಿಳುಪು

ಕಪ್ಪು -- ಬಿಳುಪು

“ You are an escapist” ನೀನು ಒಬ್ಬ ಪಲಾಯನವಾದಿ! “
ಅವ್ಳ ಸಿಹಿಯಾದ ಕಂಠದಿಂದ ಕಂಚಿನಂತ ತೀರ್ಪು ಕೊಟ್ಲು!!
“ಯಾಕ್ ಹೀಗೆ ಹೇಳ್ತೀಯಾ?” ಅಂತ ಕೇಳಿದ್ರೆ ಅವ್ಳು “ಮತ್ತೆ ಕಪ್ಪು ಇಷ್ಟಾನಾ ಬಿಳಿ ಇಷ್ಟಾನಾ ಅಂತ ಕೇಳಿದ್ರೆ ಕಪ್ಪು ಅಂತೀಯಲ್ಲಾ” ಅಂತ ಅವ್ಳು ಅಂದ್ಲು.
ನಾನಂದೇ “ಅಲ್ಲಾ ಕಪ್ಪು ಅಂದ್ರೆ ಕತ್ತಲು ಎಲ್ಲಾ ಮರೆಯಾಗೋ ಹೊತ್ತು,ಕತ್ತಲಲ್ಲಿ ನಮ್ಮ ಮುಖದ ಭಾವನೇನೇ ಕಾಣಲ್ಲ,ಕತ್ಲಲ್ಲಿ ಸತ್ಯ ಸುಳ್ಳು ಎಲ್ಲಾ ಒಂದೇ” ಅಂತ ಅಂದೆ.
ಅದ್ಕೆ ಅವ್ಳು “ಇದ್ಕೇ ನಿನ್ನ ಪಲಾಯನವಾದಿ ಅನ್ನೋದು! ನೀನು ಬೇರೆಯವ್ರಿಂದ ಅಲ್ಲಾ ನಿನ್ನಂದ್ಲೇ ನೀನು ಓಡಿಹೋಗೋಕೆ ನೋಡ್ತೀಯಾ.. ಕತ್ಲು ಎಲ್ಲಾನೂ ಮುಚ್ಚಿಡ್ಬೋದು ಆದ್ರೆ ಅದು ಒಂದು ಚಿಕ್ಕ ಹಣತೆ ಬೆಳಕಿನಂದ ಅದು ಮಾಯ ಆಗುತ್ತೇ..

ಹೌದು ಅವ್ಳು ಹೇಳ್ತಾ ಇದಹದ ಹಾಗೆ ನಾನು ಪಲಾಯನವಾದಿ or any escapist.. ! ಮೊದ್ಲಿಂದನೂ ಯಾವುದ್ರಲ್ಲೂ ಗಟ್ಟಿಯಾಗಿ ನಿಂತವನಲ್ಲ.! ಚಂಚಲ ಅಂದ್ರೇ ಚೆನ್ನಾಗಿರುತ್ತೇ.. ಎಲ್ಲರೂ ಬೆಳಕನ್ನ ಇಷ್ಟ ಪಟ್ರೇ ನಾನು ಕತ್ಲನ್ನ ಇಷ್ಟ ಪಟ್ಟೆ. ಬೆಳಕಲ್ಲಿ ಕಾಣುವ ಪರಿಚಿತ ಆದ್ರೇ ಮನಸ್ಸಿಗೆ ಅರ್ಥವಾಗ್ದೇ ಇರೋ ಅಪರಿಚಿತ ಮಿತ್ರರು,ಬಂಧು ಬಳಗ ಎಲ್ಲಕ್ಕಿಂತ ಇವೆಲ್ಲರನ್ನು ಮರೆಸೋ ಕತ್ಲು ಇಷ್ಟಾ ನಂಗೇ!
ಮುಂಜಾನೆ ಮೂಡುವ ಸೂರ್ಯನನ್ನಾ ಆರಾಧಿಸುತ್ತಾ “ಧಿಯೋಯೋನ ಪ್ರಚೋದಯಾತ್” ಜ್ಞಾನದ ಬೆಳಕನ್ನು ಹರಿಸು ಅಂತ ಪ್ರಾರ್ಥಿಸುವ family ಯಲ್ಲಿ ನನ್ನಂತ ತಮಃ ಪ್ರಿಯ ಹೇಗೆ ಹುಟ್ಟಿದ ಅನ್ನೋದೇ ಆಶ್ಚರ್ಯ!.

ಹಾಗಂತ ಅವ್ಳು ಏನೂ ಕಪ್ಪು ಅಲ್ಲ.. ಚಂದ್ರನ ಬೆಳಕಂತೇ ಇದ್ಲು ಅವ್ಳು..
“ಎಲ್ಲದ್ರಲ್ಲೂ ಕಪ್ಪು ಇಷ್ಟ ಪಡ್ತಿರೋ ನಿಂಗೆ ನನ್ನಂತ ಬಿಳಿ ಜಿರಳೆ ಯಾಕಪ್ಪಾ ಇಷ್ಟ ಆದ್ಲು?” ಅಂತ ಕೇಳಿದ್ರೆ, ನಾನು “ನೀನು ತುಂಬಾ ಬೆಳ್ಳಗಿದ್ದೀಯಾ ನೀನು black ಡ್ರೆಸ್ ಹಾಕಿದ್ರೇ ನಿಂಗಿಂತ black ಡ್ರೆಸ್ ಗೇ ಕಳೆ ಬರುತ್ತೇ ಅಂತ ಉತ್ತರ ಕೊಟ್ಟು escape ಆಗ್ತಾ ಇದ್ದ escapist ನಾನು!..
ಹಾ ಕಪ್ಪು ಡ್ರೆಸ್! ನಾನ್ ಇಷ್ಟ ಪಟ್ಟಿದ್ದಕೋ ಅಥ್ವಾ ಪ್ರಪಂಚದ ಕಪ್ಪನ್ನೆಲ್ಲಾ ಕಿತ್ತು ಹಾಕ್ಬೇಕು ಅಂತಾನೇನೋ ಅವ್ಳು ಕಪ್ಪು ಕೋಟು ತೊಟ್ಕೊಂಡ್ಲು ಅರ್ಥಾತ್ law join ಆದ್ಲು..
ಯಾವಾಗ್ಲೂ ಬಿಳಿಯಾದ ನ್ಯಾಯದೇವತೇನ ತೋರಿಸಿ “ ನೋಡು ಸತ್ಯ ಅಂದ್ರೇ ಬಿಳಿ ಅದ್ಕೇ ಅವ್ಳು ಬಿಳಿ ಇನ್ನಾದ್ರೂ ಬೆಳಕನ್ನ ಪ್ರೀತಿಸು ,ಸತ್ಯ ವಾಸ್ತವಾನ ಪ್ರೀತಿಸು! “ ಅಂತ
ಅದ್ಕೆ ನಾನು ಆ ದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟೀನೇ ಚೆಂದ ಅನ್ತಾ ಇದ್ದೆ..
“ನಂಗೆ ನಿಜವಾಗ್ಲೂ ಭಯ ಆಗ್ತಾ ಇದೆ.. ಎಲ್ಲಾದ್ರಿಂದ್ಲೂ ಓಡಿಹೋಗೋ ನೀನು ನನ್ನ ಬಿಟ್ಟು ಹೋಗಲ್ಲ ಅನ್ನೋದಕ್ಕೆ Guarantee ಏನು?
ಭಯ! ಭಯದ ಬಣ್ಣ ಕಪ್ಪು ಅಂತಾರೆ. ಆ ಕಪ್ಪು ಬಣ್ಣ ಎಲ್ಲಾ ಬಣ್ಣಾನೂ ನುಂಗಿ ಹಾಕ್ತು! ಅವ್ಳ ಭಯ ನಿಜ ಆಯ್ತು!

ಬೆಳದಿಂಗಳಂತ ಪ್ರೀತಿ ಕೊಡ್ತಿದ್ದ ಅವ್ಳನ್ನಾ ಮತ್ತೆ ಎಲ್ಲಾ ಎಲ್ಲಾ ಬಿಟ್ಟು ಓಡಿ ಹೋಗ್ಬೇಕು ಅನ್ನಿಸ್ತಾ ಇತ್ತು.
ಯಾಕಂದ್ರೇ ಹುಟ್ಟಿದಾಗಿನಿಂದ ನಾನು ಪಲಾಯನವಾದಿ!
ನನ್ನಿಂದ್ಲೇ ನಾನು ಆತ್ಮ ಸಾಕ್ಷಿಯ ವಿರುಧ್ಧ ಓಟಕ್ಕಿಳಿದೆ!

ಭಾರತದಲ್ಲಿ ಯಾರಾದ್ರೂ ಎಲ್ಲಾ ಬಿಟ್ಟು ಪಲಾಯನ ಮಾಡಿದ್ರೆ ಅದು ಹಿಮಾಲಯಕ್ಕೇ!.. ನಾನೂ ಓಡಿದ್ದು ಅಲ್ಲಿಗೇ..
ಅಲ್ಲಿ ಹಿಮದಿಂದ ನೆಲಾನೂ ಬಿಳಿ ಮೋಡದಿಂದ ಆಕಾಶಾನೂ ಬಿಳಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಹೆದ್ರಿಸಿದ್ದು ಅಲ್ಲಿನ ಜ್ಙಾನದ ಬೆಳಕು.
ಸಾಧು ಸಂತರು ಹರಿಸಿದ ಜ್ಙಾನದ ಬೆಳಕಿನಿಂದಲೋ ಏನೋ ಅಲ್ಲಿ ಎಲ್ಲಾನೂ ಬಿಳಿ..
ನನ್ನೊಳಗಿನ ಕತ್ತಲಿಗೆ ಭಯ ಶುರುವಾಯ್ತು!
ಎಂದಿನಂತೇ ಬೆಳಕಿನಿಂದ ಓಡುವಂತೇ ಮತ್ತೆ ಆ ಬೆಳಕನ್ನು ಬಿಟ್ಟು ಕತ್ತಲನ್ನೇ ಜೀವಾಳವಾಗಿಟ್ಟು ಕೊಂಡ ಆ ಮಹಾನಗರಿಗೆ ಬಂದೆ.
ನಗರದ ಝಗಮಗ ಬೆಳಕಿನಲ್ಲೂ ಜನರ ಮನದ ಕತ್ತಲನ್ನು ಕಂಡು ಖುಷಿ ಪಟ್ಟೆ.
ಕತ್ತಲನ್ನೇ ಅಸ್ತ್ರವಾಗಿಸಿ ಅವರ ಮನದ ಕತ್ತಲನ್ನು ಇನ್ನಷ್ಟು ದಟ್ಟವಾಗಿಸಿದೆ,, ಕಪ್ಪು ಧಂಧೆ,ಕಪ್ಪು ಹಣ ಹೀಗೇ ಎಲ್ಲಾನೂ ಕಪ್ಪಾಯ್ತು.ಜನರ ಮನದ ಕಪ್ಪು ಛಾಯೆಯಾಗಿ ಭಯವನ್ನು ಹುಟ್ಟಿಸಿದ್ದೆ..ಕತ್ತಲು ನನ್ನನ್ನು ಬಾಚಿ ತಬ್ಬಿಕೊಂಡಿತ್ತು..

ನನ್ನ ಕಪ್ಪಿನ ಮೇಲಿನ ಕುರುಡು ಪ್ರೀತಿ ಸಾವಿರಾರು ಅಮಾಯಕರನ್ನು ಬಲಿ ತೆಗೆದು ಕೊಂಡಿತ್ತು! ಅಂತ ಅಮಾಯಕರಲ್ಲಿ ಅವನೂ ಒಬ್ಬ..
ಆ ಅಮಾಯಕನ ಶವ ಸಂಸ್ಕಾರಕ್ಕಾಗಿ ಹೀಗೇ ತೆರಳಿದ್ದೆ.. ಮೊದಲ ಬಾರಿ ನನ್ನ ಸಾಧನೆಯ ಫಲಿತಾಂಶ ನೋಡಲು…
ಅಲ್ಲಿ ಅವನನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಬಿತೆಯ ಮೇಲೆ ಇಟ್ಟಿದ್ದರು !
ಸಂಜೆಯ ನಸುಗತ್ತಲನ್ನು ಬಿಟ್ಟರೆ ಬೇರೆ ಎಲ್ಲಾ ಬಿಳಿ ಅಲ್ಲಿ. ಬಂದು ಬಾಂಧವರೆಲ್ಲಾ ಬಿಳಿ ವಸ್ತ್ರ ಉಟ್ಟಿದ್ದರು.ನಾನೇ ಅವನ ಸಾವಿಗೆ ಕಾರಣ ಅಂತ ಗೊತ್ತಿದ್ದರೂ ಅವರೊಳಿಗಿನ ಕಪ್ಪು ಭಯ ನನ್ನಿಂದ ಅವರನ್ನು ದೂರ ಇಟ್ಟಿತ್ತು.
ಅಷ್ಟರಲ್ಲಿ ಪುಟ್ಟ ಬಾಲಕ ಒಬ್ಬ ಬಂದು “ ಅಂಕಲ್ ನನ್ನ dady ಸತ್ತು ಹೋಗಿದ್ದಾರೆ ಅಂತೆ ಅದ್ಕೇ ಎಲ್ಲಾರೂ ಬಿಳಿ ಬಟ್ಟೆ ಹಾಕಿಕೊಂಡಿದ್ದಾರೆ ನೀವ್ಯಾಕೆ ಕಪ್ಪು ಬಟ್ಟೆ ಹಾಕಿಕೊಂಡಿದ್ದೀರಾ “
ಅಲ್ಲೆಲ್ಲೋ ಬೆಳ್ಳಿ ಮಿಂಚು ಹೊಳೆದಂತಾಯ್ತು.. ಎಲ್ಲಿ ಅಂತ ನೋಡಿದ್ರೆ ಅದು ಆ ಹುಡುಗನ ಕಣ್ಣಲ್ಲಿ.. ಸತ್ಯ ಮತ್ತು ಮುಗ್ಧತೆಯ ಬೆಳಕು, ಅದು ಸ್ಪಷ್ಟವಾಗಿ ಕಾಣುತ್ತಿತ್ತು..
ನನ್ನೊಳಗಿನ ಕಪ್ಪು ಕೂಡ ಅದುರಿ ಹೋಯ್ತು. ಆ ಅಮಾಯಕನ ಶವ ಉರಿದಂತೆಲ್ಲಾ ಅಲ್ಲಿದ್ದ ಕತ್ತಲು ಮಾಯವಾಗ್ತಾ ಇತ್ತು. ನನ್ನೊಳಗಿನ ಕತ್ತಲು ಕೂಡಾ,,
ನನ್ನೊಳಗಿನ ಕತ್ತಲನ್ನೆಲ್ಲಾ ಕಳೆದು ಕೊಳ್ಳ ಬೇಕೆಂದು ನ್ಯಾಯಕ್ಕೆ ಶರಣಾದೆ….
ಅದು ನ್ಯಾಯಾಲಯ. ಏನೋ ಅಲ್ಲಿದ್ದ ಬೆಳಕು ಇಷ್ಟವಾಗ್ತಾ ಇತ್ತು..
ಅಷ್ಟರಲ್ಲಿ ಅವಳು ಬಂದಳು.. ಅದೇ ಬಿಳಿ ಹುಡುಗಿ.. ನ್ಯಾಯಾಧೀಶರ ಪೀಠದಲ್ಲಿ ಕುಳಿತುಕೊಂಡ್ಳು..

ಹೇಳಲು ಏನಾ ಇರ್ಲಿಲ್ಲ! ಅವಳು ಕಪ್ಪು ಕೋಟಿನಲ್ಲಿ 20 ವರ್ಷದ ನಂತರನೂ ಸುಂದರವಾಗಿ ಕಾಣ್ತಾ ಇದ್ಲು.
ಕಲಾಪ ಶುರುವಾಯ್ತು.ನಾನೇ ಅಪರಾಧಿ ಅಂತೆಲ್ಲಾ ನನ್ನ ಅಪರಾಧವನ್ನೆಲ್ಲಾ ಒಪ್ಪಿಕೊಣಡ್ರೂ ನನ್ನ ಸುತ್ತಲಿನ ನಾನೇ ನಿರ್ಮಿಸಿದ ಕಪ್ಪು ಸೈನ್ಯ ಬಿಡಲಿಲ್ಲ. ನಾನು ಶರಣಾದರೆ ನನ್ನ ಕಪ್ಪು ಹಣದ ಚಿಂತೆ ಅವರಿಗೆ.
ನಾನು ಮತಿವಿಕಲ,ಭ್ರಾಂತ ಅಂತ ಕಪ್ಪು ಕೋಟಿನ ವಕೀಲರು ವಾದಿಸುತ್ತಾ ನಾನು ಶಿಕ್ಷೆಗೆ ಅರ್ಹನಲ್ಲ ಅಂತ ವಾದಿಸಿದ್ರು,ಸಾಬೀತು ಪಡಿಸಿದ್ರೂ ಕೂಡಾ!
“ಶಿಕ್ಷಿಸಿ ಶಿಕ್ಷಿಸಿ ಅಂತ ಅತ್ತು ಕೊಂಡ್ರೂ ಕೂಡಾ ಅದು ವ್ಯರ್ಥವಾಯ್ತು…
ಅವಳು “ನೀನು ಒಬ್ಬ ಮತಿ ವಿಕಲ ಭ್ರಾಂತ ಇರದೇ ಇರಬಹುದು. ಆದ್ರೆ ನೀನು ಒಬ್ಬ escapist. ಇದುವರೆಗೂ ಪ್ರೀತಿಸುತ್ತಾ ಬಂದ ಕಪ್ಪನ್ನಾದರೂ ಶಾಶ್ವತವಾಗಿ ಇಟ್ಟು ಕೊಂಡಿದ್ದೀಯಾ? ಅದರಿಂದಲೂ ಪಲಾಯನ. ವಾದ ಪ್ರತಿವಾದದಿಂದ ನೀನು ಮತಿವಿಕಲ ಎಂದು ಸಾಬೀತಾಗಿರುವುದರಿಂದ ನೀನು ಶಿಕ್ಷೆಗೆ ಅರ್ಹನಲ್ಲ,ನಿನ್ನನ್ನು ಶಿಕ್ಷಿಸದೇ ಬಿಡುವುದೇ ನಿಂಗೆ ಅತಿ ದೊಡ್ಡ ಶಿಕ್ಷೆ!…

ನಾನು ಪ್ರಯತ್ನಿಸಿದಷ್ಟು ಕಪ್ಪು ಮತ್ತೆ ನನ್ನ ಆವರಿಸುತಿತ್ತು…
ಅಷ್ಟರಲ್ಲಿ ಏನೋ ದೊಡ್ಡ ಸದ್ದು! ಗುಂಡಿನ ಸದ್ದು.. ನಾನು ನನ್ನ ಎದೆ ನೋಡಿಕೊಂಡ್ರೆ ಅಲ್ಲಿ ಕಪ್ಪು ರಂಧ್ರ. ಯಾರೋ ಅಮಾಯಕನ ಸಾವಿಗೆ ಪ್ರತೀಕಾರವಾಗಿತ್ತು!
ಎದೆಯಿಂದ ಸುರಿಯುತ್ತಿರುವ ರಕ್ತ ಕೂಡಾ ಕಪ್ಪು ಅನ್ನಿಸ್ತಾ ಇತ್ತು.. ಹೌದು ಕಪ್ಪು ಹೃದಯದ ಕಪ್ಪು ರಕ್ತ!
ಆದ್ರೂ ಏನೋ ತಂಪಾದಂತೆ ಅನ್ನಿಸ್ತಾ ಇತ್ತು.. ಎಲ್ಲಾ ಕಡೆ ಕತ್ತಲು ಆವರಿಸಿದಂತೆ ಅನ್ನಿಸ್ತು!
ನ್ಯಾಯದೇವತೆಯನ್ನ ನೋಡಿದೆ. ಆ ದೇವತೆಯ ಕಣ್ಣಿಗೆ ಕಟ್ಟಿದ್ದ ಕಪ್ಪು ಪಟ್ಟಿ ಹಾರಿ ಹೋಗಿತ್ತು. ಆ ದೇವತೆಯ ಬಿಳಿ ಬಣ್ಣವೇ ಕೊನೆಯ ಬಣ್ಣ!

ನನ್ನೊಳಗೆ ಜನ್ಮದಿಂದ ಆವರಿಸಿದ್ದ ಕತ್ತಲು ಮಾಯವಾಗಿ ಅಲ್ಲಿ ಕೇವಲ ಶುಭ್ರ,ಶಾಂತ,ಶ್ವೇತ ವರ್ಣ ಮಿನುಗುತ್ತಿತ್ತು!!!!!.....


ಕಥೆಗಾರ : ಶಿವಾನಂದನ ರಾವ್.

No comments:

Post a Comment